ನಮ್ಮ ಹಿರಿಯರು

ಅಲ್ ಅನ್ಸಾರ್ ಪತ್ರಿಕೆಯು ಮಹಾನ್ ಪಂಡಿತರೂ ದೂರದೃಷ್ಟಿಯ ನಾಯಕರೂ ಮತ್ತು ಮೌನ ಸೇವಕರಿಂದಲೂ ನಿರ್ಮಿತವಾದ ದೃಢವಾದ ಅಡಿಪಾಯದ ಮೇಲೆ ನಿಂತಿದೆ. ಅವರು ಅಹ್ಲುಸ್ಸುನ್ನತ್‌ನ ಏಕತೆಯನ್ನು ಕಾಪಾಡಿ, ನಿಖರವಾದ ಜ್ಞಾನವನ್ನು ಹರಡುವ ಕಾರ್ಯದಲ್ಲಿ ತಮ್ಮ ಜೀವನವನ್ನು ಸಮರ್ಪಿಸಿದರು. ಅವರ ಸೇವಾ ಪರಂಪರೆ ಇಂದಿಗೂ ನಮ್ಮ ದಾರಿಯನ್ನು ಬೆಳಗಿಸುತ್ತದೆ.

ಅಲ್ ಅನ್ಸಾರ್ ಪತ್ರಿಕೆಯು ಮಹಾನ್ ವಿದ್ವಾಂಸರೂ ದೂರದೃಷ್ಟಿಯ ನಾಯಕರೂ ಆದ ಧರ್ಮ ಸೇವಕರಿಂದ ರೂಪಿಸಲಾದ ದೃಢವಾದ ಅಡಿಪಾಯದ ಮೇಲೆ ನಿಂತಿದೆ. ಅವರು ಅಹ್ಲುಸ್ಸುನ್ನತ್‌ನ ಏಕತೆಯನ್ನು ಕಾಪಾಡಿ, ನಿಖರವಾದ ಜ್ಞಾನವನ್ನು ಹರಡುವ ಕಾರ‍್ಯದಲ್ಲಿ ತಮ್ಮ ಜೀವನವನ್ನು ಸಮರ್ಪಿಸಿದರು. ಅವರ ಸೇವಾ ಪರಂಪರೆ ಇಂದಿಗೂ ನಮ್ಮ ದಾರಿಯನ್ನು ಬೆಳಗಿಸುತ್ತಿದೆ.

ತಾಜುಲ್ ಉಲಮಾ ಶೈಖುನಾ ಅಸ್ಸಯ್ಯಿದ್ ಅಬ್ದರ‍್ರಹ್ಮಾನ್ ಅಲ್ ಬುಖಾರಿ

ತಾಜುಲ್ ಉಲಮಾ ಶೈಖುನಾ ಅಸ್ಸಯ್ಯಿದ್ ಅಬ್ದರ‍್ರಹ್ಮಾನ್ ಅಲ್ ಬುಖಾರಿ

1341-1435 ಹಿಜ್ರಾ

ಶೈಖುನಾ ತಾಜುಲ್ ಉಲಮಾ ಮುಸ್ಲಿಂ ಜ್ಞಾನ ಜಗತ್ತಿನ ಪ್ರಮುಖ ಪಂಡಿತರಾಗಿದ್ದು, ಅಹ್ಲುಸ್ಸುನ್ನತ್‌ನ ಅಗ್ರಗಣ್ಯ ನಾಯಕರಾಗಿದ್ದರು. ಅವರು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಅನುಗ್ರಹೀತ ಕುಟುಂಬ ಪರಂಪರೆಯ ಸದಸ್ಯರಾಗಿದ್ದು, 95 ವರ್ಷಗಳ ಪವಿತ್ರ ಜೀವನವನ್ನು ನಡೆಸಿ ಇಹಲೋಕ ತ್ಯಜಿಸಿದರು. ತಮ್ಮ ಜೀವನ ಕಾಲದ 65 ವರ್ಷಗಳನ್ನು ಉಳ್ಳಾಲದಲ್ಲಿ ಸವೆಸುವ ಮೂಲಕ ಅವರು “ಉಳ್ಳಾಲ್ ತಂಙಳ್” ಎಂದೇ ಪ್ರಸಿದ್ಧರಾಗಿದ್ದರು.

ವಂಶಪಾರಂಪರ್ಯ: ಅವರು ಅಹ್ಲುಬೈತ್‌ನ ಪ್ರಸಿದ್ಧ ಬುಖಾರಿ ಕುಟುಂಬಕ್ಕೆ ಸೇರಿದವರು. ಈ ವಂಶವು ಸಯ್ಯಿದ್ ಅಹ್ಮದ್ ಜಲಾಲುದ್ದೀನ್ ತಂಙಳ್ ಅವರ ಮೂಲಕ ಆರು ಶತಮಾನಗಳ ಹಿಂದೆ ರಷ್ಯಾದಿಂದ ದಕ್ಷಿಣ ಭಾರತಕ್ಕೆ ಪ್ರವಾದಿ ವಂಶ ಪರಂಪರೆಯನ್ನು ತಂದಿತು.

ಶಿಕ್ಷಣ: ಕನ್ನಿಯತ್ ಅಹ್ಮದ್ ಮುಸ್ಲಿಯಾರ್ ಮೊದಲಾದ ಮಹಾನ್ ಪಂಡಿತರ ಅಧೀನದಲ್ಲಿ ವಿದ್ಯಾಭ್ಯಾಸ ಮಾಡಿ, ವೆಲ್ಲೂರಿನ ಪ್ರಸಿದ್ಧ ಬಾಖಿಯಾತ್ ವಿದ್ಯಾಸಂಸ್ಥೆಯಲ್ಲಿ ಉನ್ನತ ಶಿಕ್ಷಣ ಪಡೆದು ಪ್ರಥಮ ರ್ಯಾಂಕ್‌ನೊಂದಿಗೆ ‘ಬಾಖವಿ’ (MFB) ಪದವಿ ಪಡೆದರು.

ಸೇವೆ: 1951ರಲ್ಲಿ ಉಳ್ಳಾಲಕ್ಕೆ ಆಗಮಿಸಿ, 20 ವರ್ಷಗಳ ಕಾಲ ಅಲ್ಲಿನ ದರ್ಸ್‌ನಲ್ಲಿ ಮುರ‍್ರಿಸ್ ಆಗಿ ಸೇವೆ ಸಲ್ಲಿಸಿದ ಅವರು, 1972ರಲ್ಲಿ ಅದು ಅರಬಿಕ್ ಕಾಲೇಜ್ ಆಗಿ ಉನ್ನತಿಗೇರಿದಾಗ ಅದರ ಪ್ರಾಂಶುಪಾಲರಾದರು.

ನಾಯಕತ್ವ: 1978ರಲ್ಲಿ ಖಾಝಿ ಸ್ಥಾನವನ್ನು ಸ್ವೀಕರಿಸಿದ ಅವರು, ಕರ್ನಾಟಕ ಮತ್ತು ಕೇರಳದ ನೂರಾರು ಮೊಹಲ್ಲಾಗಳಿಗೆ ಖಾಝಿಯಾಗಿ ಸೇವೆ ಸಲ್ಲಿಸಿದ್ದರು. 1989ರಿಂದ ಸಮಸ್ತ (ಅಧಿಕೃತ ಉಲಮಾ ಸಂಘಟನೆ) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಗಲ್ಫ್ ರಾಷ್ಟ್ರಗಳು, ಈಜಿಪ್ಟ್, ಇರಾಕ್ ಸೇರಿದಂತೆ ಹಲವಾರು ದೇಶಗಳಿಗೆ ಭೇಟಿ ನೀಡಿದ್ದ ಅವರು ಜಾಗತಿಕವಾಗಿಯೂ ಗುರುತಿಸಿಕೊಂಡಿದ್ದರು.

ಹಿಜ್ರಾ ವರ್ಷ 1435ರ ರಬೀಉಲ್ ಆಖರ್‌ ಒಂದರಂದು ಅವರು ಕೀರ್ತಿಶೇಷರಾದರು.

ತಾಜುಲ್ ಫುಖಹಾ ಬೇಕಲ್ ಉಸ್ತಾದ್

ತಾಜುಲ್ ಫುಖಹಾ ಬೇಕಲ್ ಉಸ್ತಾದ್

1949-2020

1949 ರಲ್ಲಿ ಪೂಡಲ್ ಗ್ರಾಮದಲ್ಲಿ ಪಿ.ಎಂ. ಇಬ್ರಾಹಿಂ ಎಂಬ ಹೆಸರಿನಲ್ಲಿ ಜನಿಸಿದ ಬೇಕಲ್ ಉಸ್ತಾದ್, ಅರ್ಧ ಶತಮಾನಕ್ಕೂ ಅಧಿಕ ಕಾಲ ಸಮುದಾಯಕ್ಕೆ ಸೇವೆ ಸಲ್ಲಿಸಿದ, ಆಳವಾದ ಜ್ಞಾನ ಹೊಂದಿದ ಪಂಡಿತರಾಗಿದ್ದರು.

ವೃತ್ತಿ: 40 ವರ್ಷಗಳ ಕಾಲ ಬೇಕಲ್ ಜುಮಾ ಮಸೀದಿಯಲ್ಲಿ ಮುದರ್ರಿಸ್ ಆಗಿ ಸೇವೆ ಸಲ್ಲಿಸುವ ಮೂಲಕ “ಬೇಕಲ್ ಉಸ್ತಾದ್” ಎಂದೇ ಪ್ರಸಿದ್ಧರಾದ ಅವರು,‌ ನಂತರ ಪ್ರತಿಷ್ಠಿತ ಜಾಮಿಆ ಸಅದಿಯಾ ಕಾಲೇಜಿನ ಪ್ರಾಂಶುಪಾಲರಾದರು.

ಅಲ್ ಅನ್ಸಾರ್ ಸಂಪಾದಕ:26 ವರ್ಷಗಳ ಕಾಲ ಅಲ್ ಅನ್ಸಾರ್ ಪತ್ರಿಕೆಯ ಮುಖ್ಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ ಬೇಕಲ್ ಉಸ್ತಾದ್, “ಕೇಳಿ ನೋಡಿ” ಪ್ರಶ್ನೋತ್ತರ ವಿಭಾಗವನ್ನು ಸ್ವತಃ ನಿರ್ವಹಿಸಿ, ಸಮುದಾಯಕ್ಕೆ ಅತ್ಯಂತ ಮೌಲ್ಯಯುತ ಮತ್ತು ನಿಖರ ಧಾರ್ಮಿಕ ಉತ್ತರಗಳನ್ನು ನೀಡಿದರು.

ಖಾಝಿ ಸ್ಥಾನ: ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಕಾಸರಗೋಡು ಜಿಲ್ಲೆಗಳ 150ಕ್ಕೂ ಹೆಚ್ಚು ಮೊಹಲ್ಲಾಗಳ ಉನ್ನತ ಖಾಝಿ ಸ್ಥಾನವನ್ನು ಅಲಂಕರಿಸಿದ್ದರು.

ತಾಜುಲ್ ಉಮರಾ: ಇಬ್ರಾಹಿಂ ಬಾವಾ ಹಾಜಿ

ತಾಜುಲ್ ಉಮರಾ: ಇಬ್ರಾಹಿಂ ಬಾವಾ ಹಾಜಿ

ಅಲ್ ಅನ್ಸಾರ್ ಸ್ಥಾಪಕರು (1991)

ಇಬ್ರಾಹಿಂ ಬಾವಾ ಹಾಜಿ ಸಾಕಷ್ಟು ಧಾರ್ಮಿಕ ಜ್ಞಾನ ಹೊಂದಿದ್ದ ಸಾಮಾಜಿಕ ನಾಯಕ. ಬಿಎಸ್ಸಿ ಪದವೀಧರರಾಗಿದ್ದು, ಸಮರ್ಪಿತ ಸಮಾಜಸೇವಕರಾಗಿದ್ದರು. ಮಂಗಳೂರು ಝೀನತ್ ಭಕ್ಷ್ ಯತೀಂಖಾನಾ ಸೇರಿದಂತೆ ಹಲವಾರು ಸಂಸ್ಥೆಗಳ ಅಧ್ಯಕ್ಷರಾಗಿ, ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದರು.

ಅಲ್ ಅನ್ಸಾರ್ ಸ್ಥಾಪನೆ: 1991ರಲ್ಲಿ ಅಲ್ ಅನ್ಸಾರ್ ಪತ್ರಿಕೆಯನ್ನು ಸ್ಥಾಪಿಸಿದರು.

ಸುನ್ನಿ ಸಿದ್ಧಾಂತಕ್ಕೆ ವಿರುದ್ಧವಾದ ಪ್ರಕಟಣೆಗಳು ಹರಡುತ್ತಿದ್ದ ಸಮಯದಲ್ಲಿ ಜನರಿಗೆ ಅದನ್ನು ಓದಬಾರದೆಂದು ಹೇಳಲಾಗುತ್ತಿತ್ತು. ಆದರೆ ಸರಿಯಾದ ಮಾಹಿತಿಯನ್ನು ನೀಡುವ ಪರ‍್ಯಾಯ ಪ್ರಕಾಶನಗಳಿರಲಿಲ್ಲ. ಈ ಕೊರತೆಯನ್ನು ನೀಗಿಸುವುದಕ್ಕಾಗಿ, ಸುನ್ನಿ ಅಖೀದಕ್ಕೆ ಹೊಂದಿಕೊಂಡ ನಿಖರ ಮಾಹಿತಿಯನ್ನು ನೀಡುವುದಕ್ಕಾಗಿ ಇಬ್ರಾಹಿಂ ಬಾವಾ ಹಾಜಿಯವರು ಅಲ್ ಅನ್ಸಾರ್ ಅನ್ನು ಸ್ಥಾಪಿಸಿದರು.

ಎಚ್ಚರಿಕೆ: ಪ್ರತಿಯೊಂದು ಲೇಖನ ಮತ್ತು ಪತ್ರವನ್ನು ಪ್ರಕಟಣೆಗೆ ಮೊದಲು ಸ್ವತಃ ಪರಿಶೀಲಿಸುತ್ತಿದ್ದ ಬಾವಾ ಹಾಜಿಯವರು, ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಅಥವಾ ಸರಿಯಾದ ಮಾರ್ಗದಿಂದ ವಿಚಲಿತಗೊಳಿಸುವ ಯಾವುದೇ ವಿಷಯ ಕಂಡುಬಂದರೆ ಅದನ್ನು ತಕ್ಷಣವೇ ರದ್ದುಪಡಿಸುತ್ತಿದ್ದರು.

ಈ ಕಾಳಜಿಯಿಂದ ಪತ್ರಿಕೆಯು ಸಮುದಾಯದಲ್ಲಿ ಯಾವತ್ತೂ ಕಲಹ ಉಂಟುಮಾಡಲಿಲ್ಲ.

ಉಂಞಿ ಹಾಜಿ: ಅಲ್ ಅನ್ಸಾರ್‌ ನ ಬೆನ್ನೆಲುಬು

ಉಂಞಿ ಹಾಜಿ: ಅಲ್ ಅನ್ಸಾರ್‌ ನ ಬೆನ್ನೆಲುಬು

ಇಬ್ರಾಹಿಂ ಬಾವಾ ಹಾಜಿಯವರ ಬಾವನವರಾದ ಕುಂಞಿ ಅಹ್ಮದ್ ಹಾಜಿ ಎಂಬ ಉಂಞಿ ಹಾಜಿಯವರ ನಿಸ್ವಾರ್ಥ ಬೆಂಬಲದಿಂದ ಅಲ್ ಅನ್ಸಾರ್ ಪತ್ರಿಕೆಯ ಯಶಸ್ಸು ಸಾಧ್ಯವಾಯಿತು. ಇಬ್ಬರೂ ಪರಸ್ಪರರ ಸಹೋದರಿಯರನ್ನು ವಿವಾಹವಾದ ಅತ್ಯಂತ ಆಪ್ತ ಸ್ನೇಹಿತರಾಗಿದ್ದರು.

ಮೌನ ಸಹಭಾಗಿ: ಪತ್ರಿಕೆಯು ಆರ್ಥಿಕ ಸಂಕಷ್ಟಗಳನ್ನು ಎದುರಿಸಿದಾಗಲೆಲ್ಲ, ಉಂಞಿ ಹಾಜಿಯವರು ಸದಾ ಅದರ ಜೊತೆ ಗಟ್ಟಿಯಾಗಿ ನಿಂತರು. ಅವರ ಹೆಸರು ಸಂಪಾದಕ ಅಥವಾ ನಿರ್ವಾಹಕರಾಗಿ ಅಧಿಕೃತವಾಗಿ ಪ್ರಕಟವಾಗದಿದ್ದರೂ, ನಿಧಿ ಸಂಗ್ರಹಣೆ ಮತ್ತು ಕಚೇರಿಯ ದೈನಂದಿನ ಕಾರ‍್ಯಾಚರಣೆಯ ಸಮಸ್ಯೆಗಳನ್ನು ಪರಿಹರಿಸುವ ಹೊಣೆಗಾರಿಕೆಯನ್ನು ಹೊತ್ತಿದ್ದರು.

ಸ್ನೇಹದ ಪರಂಪರೆ: ತಮ್ಮ ಖ್ಯಾತಿಗಿಂತ ಸ್ನೇಹಿತನ ಕನಸಿಗೆ ಆದ್ಯತೆ ನೀಡಿದರು. ಪತ್ರಿಕೆ ಉಳಿದರೆ ತಮ್ಮ ಮಿಷನ್ ಯಶಸ್ವಿ ಎಂದು ನಂಬಿದರು. ಇಬ್ಬರೂ ತಮ್ಮ ಜೀವನದ ಅಂತ್ಯದವರೆಗೂ ಈ ಮಿಷನ್‌ನಲ್ಲಿ ಏಕಮನಸ್ಕರಾಗಿದ್ದರು.